ಕ್ರಿಪ್ಟೋಮೀರಿಯ

ನಗ್ನಬೀಜಿ ಸಸ್ಯಗುಂಪಿನ ಪೈನೇಸೀ ಕುಟುಂಬಕ್ಕೆ ಸೇರಿದ ಒಂದು ನಿತ್ಯಹರಿದ್ವರ್ಣದ ಶಂಕುವೃಕ್ಷ. ಇದಕ್ಕೆ ಜಪಾನೀ ಸೀಡರ್ ಎಂಬ ಸಾಮಾನ್ಯ ಬಳಕೆಯ ಹೆಸರಿದೆ. ಜಪಾನಿಕ ಎಂಬ ಒಂದೇ ಪ್ರಭೇದವನ್ನೊಳಗೊಂಡಿರುವ ಇದರ ತವರು ಚೀನ. ಇದಕ್ಕೆ ಸುಂದರವಾದ ಪಿರಮಿಡ್ ಆಕೃತಿಯಿರುವುದರಿಂದಲೂ ಇದರ ಎಲೆಗಳು ಯಾವಾಗಲೂ ಹಸಿರಾಗಿರುವುದರಿಂದಲೂ ಇದನ್ನು ಚೀನ ಮತ್ತು ಜಪಾನುಗಳಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲೂ ಉದ್ಯಾನಗಳಲ್ಲೂ ಶೋಭೆಗೆಂದು ಬೆಳೆಸಲಾಗಿದೆ. ಅಲ್ಲದೆ ಇದರ ಚೌಬೀನೆ ಮೃದುವಾಗಿಯೂ ಕೆಂಪುಮಿಶ್ರಿತ ಕಂದುಬಣ್ಣದ್ದಾಗಿಯೂ ಇದ್ದು ಮರಗೆಲಸಕ್ಕೆ ಸುಲಭವಾಗಿ ಮಣಿಯುವುದರಿಂದ ಇದನ್ನು ಕಟ್ಟಡದ ಕೆಲಸಗಳಿಗೆ, ಪೀಪಾಯಿ ಮತ್ತು ಟೀ ಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಹಿಮಾಲಯ ಪರ್ವತಶ್ರೇಣಿಗಳಲ್ಲಿ ಇದು ಬೆಳೆಯುತ್ತದೆ.       								         (ಎ.ಕೆ.ಎಸ್.)

ಕ್ರಿಪ್ಟೊಮೀರಿಯ ಸುಮಾರು 125' ಎತ್ತರಕ್ಕೆ ಬೆಳೆಯುವ ಬೃಹದ್ಗಾತ್ರದ ಮರ. ಇದಕ್ಕೆ ನೇರವಾಗಿ ಬೆಳೆಯುವ ನಾಜೂಕಿನ ಮುಖ್ಯ ಕಾಂಡವಿದೆ. ತೊಗಟೆ ಕೆಂಪುಮಿಶ್ರಿತ ಕಂದುಬಣ್ಣದ್ದು. ಎಲೆಗಳು ಉದ್ದನೆಯ ಕಡ್ಡಿಗಳಂತಿದ್ದು ಸುರುಳಿಸುರುಳಿಯಾಗಿ ಜೋಡಣೆಗೊಂಡಿವೆ. ಹೂಗಳು ಏಕಲಿಂಗಿಗಳು; ಬೇರೆಬೇರೆ ಶಂಕುಗಳಲ್ಲಿ (ಕೋನ್) ಸಮಾವೇಶಗೊಂಡಿವೆ. ಹಲವಾರು ಗಂಡುಶಂಕುಗಳು ಗುಂಪುಗೂಡಿಕೊಂಡು ರೆಂಬೆಗಳ ತುದಿಯಲ್ಲಿ ಹುಟ್ಟುತ್ತವೆ. ಇವುಗಳ ಆಕಾರ ದೀರ್ಘ ಅಂಡದಂತೆ. ಹೆಣ್ಣು ಶಂಕುಗಳು ಗುಂಡಗಿವೆ; ಒಂಟೊಂಟಿಯಾಗಿ ಮೋಟು ರೆಂಬೆಗಳ ತುದಿಯಲ್ಲಿ ಹುಟ್ಟುತ್ತವೆ. ಪ್ರತಿ ಶಂಕುವಿನಲ್ಲಿ ಹಲವಾರು ಪಟ್ಟಿಗಳೂ ಒಂದೊಂದು ಪಟ್ಟಿಗೆ ಅಂಟಿದಂತೆ 3-5 ಅಂಡಕಗಳೂ ಇವೆ. ಅಂಡಕಗಳು ನಿಷೇಚನಗೊಂಡು ಬೀಜಗಳಾದಂತೆ ಅವಕ್ಕೆ ತೆಳುವಾದ ರೆಕ್ಕೆ ಮೂಡುತ್ತದೆ. ಬೀಜ ಪ್ರಸರಣಕ್ಕೆ ಈ ರೆಕ್ಕೆ ಸಹಕಾರಿ. ಕ್ರಿಪ್ಟೊ ಮೀರಿಯವನ್ನು ಬೀಜಗಳ ಮೂಲಕ ಇಲ್ಲವೆ ಕಾಂಡ ತುಂಡುಗಳ ಮೂಲಕ ವೃದ್ಧಿಸಲಾಗುತ್ತದೆ. ಇದರ ಬೆಳವಣಿಗೆಗೆ ಫಲವತ್ತಾದ ತೇವಪೂರಿತ ಗೋಡುಮಣ್ಣು ಮತ್ತು ನೆರಳು ಅತ್ಯಗತ್ಯ.         *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ